ಪೆಟ್ರೆಲ್	-	
ನಿಯೋನ್ಯಾತೀ ಅಧಿಗಣಕ್ಕೂ ಪ್ರೊಸೆಲೇರಿಯಿಫಾರ್ಮೀಸ್ ಗಣಕ್ಕೂ ಸೇರಿದ ಸಾಗರವಾಸಿ ಪಕ್ಷಿ. ಆಲ್ಬಟ್ರಾಸ್ ಮತ್ತು ಶಿಯರ್‍ವಾಟರ್ ಹಕ್ಕಿಗಳಿಗೆ ಸಂಬಂಧಿ. ಇದರಲ್ಲಿ ಹೈಡ್ರೊಬೇಟಿಡೀ ಕುಟುಂಬಕ್ಕೆ ಸೇರಿದ ಸ್ಟಾರ್ಮ್ ಪೆಟ್ರೆಲ್ ಮತ್ತು ಪೆಲೆಕಾನಾಯ್ಡಿಡೀ ಕುಟುಂಬಕ್ಕೆ ಸೇರಿದ ಡೈವಿಂಗ್ ಪೆಟ್ರೆಲ್ ಎಂಬ ಎರಡು ಬಗೆಗಳಿವೆ.

	ಪೆಟ್ರೆಲ್‍ಗಳು ಸಾಗರ ಜೀವನಕ್ಕೆ ಅದ್ಭುತವಾಗಿ ಹೊಂದಿಕೊಂಡಿವೆ. ತಮ್ಮ ಜೀವನದ ಬಹುಭಾಗವನ್ನು ಸಮುದ್ರ ನೀರಿನ ಮೇಲೆ ಸವೆಸುವುವು. ಇವು ಸದಾ ಹಾರಾಡುತ್ತ ಸಮುದ್ರದಲ್ಲಿ ಯಾನ ಮಾಡುವ ಹಡಗುಗಳನ್ನು ಹಿಂಬಾಲಿಸುತ್ತ ಇರುವುವಾದ್ದರಿಂದ ನಾವಿಕರಿಗೆ ಅತ್ಯಂತ ಪರಿಚಿತ ಪಕ್ಷಿಗಳೆನಿಸಿವೆ. ಇದರಿಂದಾಗಿ ಇವನ್ನು ಸಂಬಂಧಿಸಿದಂತೆ ಅನೇಕ ದಂತಕಥೆಗಳುಂಟು. ದೈವ ಸಹಾಯದಿಂದ ನೀರಿನ ಮೇಲೆ ನಡೆದ ಸೇಂಟ್ ಪೀಟರ್‍ನಂತೆಯೇ ಇವೂ ಕೂಡ ನೀರ ಮೇಲೆ ನಡೆಯುವುವೆಂಬ ಕತೆಯಿದೆ. ಇವಕ್ಕೆ ಪೆಟ್ರಿಲ್ ಎಂಬ ಹೆಸರು ಬರಲು ಈ ನಂಬಿಕೆಯೇ ಕಾರಣವಿರಬೇಕು. ನಾವಿಕರ ರಕ್ಷಾದೇವತೆಯಾದ"ಮೇಟರ್‍ಕಾರಾ ಳ (ಮದರ್ ಕ್ಯಾರೀ) ಅಚ್ಚುಮೆಚ್ಚಿನ ಮರಿ ಹಕ್ಕಿಗಳು ಇವು ಎಂಬ ನಂಬಿಕೆಯೂ ಇದೆ. 

	ಪೆಟ್ರೆಲ್‍ಗಳು ಸಣ್ಣ ಗಾತ್ರದ ಹಕ್ಕಿಗಳು. ದೇಹದ ಉದ್ದ 25 ಸೆಂ.ಮೀ. ಮೀರದು. ಇವುಗಳಲ್ಲಿ ಹಲವಾರು ಬಗೆಗಳಿವೆಯಾದರೂ ನೋಡಲು ಹೆಚ್ಚು ಕಡಿಮೆ ಒಂದೇ ತೆರನಾಗಿವೆ. ದೇಹದ ಬಣ್ಣ ಕಪ್ಪು ಇಲ್ಲವೇ ಕಗ್ಗಂದು. ಪ್ರೊಸೆಲೇರಿಯಿ ಫಾರ್ಮೀಸ್ ಗಣದ ಎಲ್ಲ ಹಕ್ಕಿಗಳಲ್ಲಿರುವಂತೆ ಇವುಗಳ ನಾಸಿಕ ರಂಧ್ರ ಉದ್ದ ಕೊಳವೆಯಂತಿದೆ. ಸಾಗರ ಜೀವನಕ್ಕೆ ಅತ್ಯಂತ ಚೆನ್ನಾಗಿ ಹೊಂದಿಕೊಂಡಿರುವ ಈ ಹಕ್ಕಿಗಳು ಸಂತಾನಾಭಿವೃದ್ಧಿಗೆಂದು ಮಾತ್ರ ಭೂಮಿಗೆ ಬರುವುವು. ಇವುಗಳ ಆಹಾರ ಪ್ರಧಾನವಾಗಿ ಸಾಗರದಲ್ಲಿನ ಸಂಧಿಪದಿಗಳು, ಮೃದ್ವಂಗಿಗಳು ಹಾಗೂ ಕ್ರಸ್ಟೇಸಿಯಗಳು, ಅಲೆಗಳ ಮೇಲೆಯೇ ಅತ್ಯಂತ ಚಾಕಚಕ್ಯತೆಯಿಂದ ಹಾರಾಡುತ್ತಿದ್ದು ಆಗಾಗ್ಗೆ ಮೇಲೆ ಬರುವ ಎರೆಗಳನ್ನು ಹಿಡಿಯುವುವು. ಅಷ್ಟು ಕೆಳಮಟ್ಟದಲ್ಲಿ ಸರಾಗವಾಗಿ ಹಾರುವ ಇವು ನೀರಿಗೆ ಆಗಾಗ್ಗೆ ಇಳಿದು ಈಜುವುದೂ ಉಂಟು. ನೆಲದ ಮೇಲೆ ಚೆನ್ನಾಗಿ ಓಡಾಡಲಾರವು.

	ಸಮುದ್ರದ ನಡುವಣ ದ್ವೀಪಗಳಲ್ಲಿ, ಇಲ್ಲವೇ ಕರಾವಳಿಯ ಬಳಿ ಇರುವ ಬೆಟ್ಟಗಳಲ್ಲಿ ಮೊಟ್ಟೆ ಇಡುವುವು. ಆ ಕಾಲದಲ್ಲಿ ಅಗಾಧ ಸಂಖ್ಯೆಯಲ್ಲಿ ಒಂದೆಡೆ ಸೇರುತ್ತವೆ. ಪೊಟರೆಗಳಲ್ಲೋ ಇಲ್ಲವೇ ತಾವೇ ರಚಿಸಿದ ಗುಳಿಗಳಲ್ಲೋ ಮೊಟ್ಟೆಗಳನ್ನು ಇಟ್ಟು ಗಂಡು ಹೆಣ್ಣು ಹಕ್ಕಿಗಳೆರಡೂ ಸರದಿಯ ಮೇಲೆ ಕಾವು ಕೂತು ಮರಿ ಮಾಡುವುವು. 5-7 ವಾರಗಳ ತರುವಾಯ ಮರಿಗಳು ಹೊರಬರುತ್ತವೆ. 7 ರಿಂದ 9 ವಾರಗಳ ಅನಂತರ ಮರಿಗಳು ದೊಡ್ಡವಾಗುವುವು. ಆಗ ತಂದೆ ತಾಯಿಗಳು ಅವನ್ನು ತೊರೆದು ಹೋಗುತ್ತವೆ.

	ಪೆಟ್ರೆಲ್‍ಗಳು ಪ್ರಪಂಚದ ಎಲ್ಲ ಸಾಗರಗಳಲ್ಲೂ ವಾಸಿಸುತ್ತವೆ.      (ಎಚ್.ಎಚ್.ಎಸ್.)
								(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ